
ಕನಸ ಕರಗಿಸಲಾರೆ
ಕನಸ ಕರಗಿಸಲಾರೆ
ಕಾಲನಾ ಕರಗಂಟೆ ಕರೆಯುವವರೆಗೆ
ಬಸುರಿಂದ ಟಿಸಿಲೊಡೆದು
ಬಂದಂದಿನಿಂದಲೂ ನನ್ನುಸಿರು ಈ ಕನಸು
ಕನಸ ಕರಗಿಸಲಾರೆ
ಹಸಿರುಸಿರು ವನಹಸಿರು
ಮನ ಬಂದಂತೆ ತೇಲುವ ಹಕ್ಕಿ
ಅದಕಿಲ್ಲದಿರೆ ಬಂಧ
ಅದರಂತೆ ನನ್ನ ಕನಸು ನಿರ್ಬಂಧ
ಕನಸ ಕರಗಿಸಲಾರೆ
ಅಮ್ಮನಿಲ್ಲದಿರೆ ಕೊರಗೇಕೆ?
ಅಪ್ಪನಿಲ್ಲದಿರೆ ಭಯವೇಕೆ?
ಕನಸ ಕರೆಯುವೆನು ಕಣ್ಣ ಅಂಗಳಕೆ,
ಅಮ್ಮ ನೀಡುವ ತುತ್ತ ತಿನ್ನುವ ಬಯಕೆ.
ಅಪ್ಪನ ಸಾವಿರ ಹಾರೈಕೆ, ಹೆಬ್ಬಯಕೆ
ರೆಪ್ಪೆಯಡಿ ಮುಚ್ಚಿಡುವೆ
ಕನಸ ಕರಗಿಸಲಾರೆ.
ಬಿಡಲಾರೆ ಈ ಕನಸ ನನ್ನ ತೊರೆಯಲು,
ಸುತ್ತುವೇನು ಯಮಪಾಶ,
ಸುತ್ತಿದಂತೆ ಮಾರ್ಕಂಡೇಯನ ಕೊರಳು.
ನನಸಾಗದಿರೆ ಚಿಂತೆಯಿಲ್ಲ,
ಕಟ್ಟಲಾರೆ ಕನಸಿನ ಚಿತೆಯನ್ನ.
ಕನಸ ಕರಗಿಸಲಾರೆ.