Tuesday 4 September 2012

                    ಶ್ರೀ ಗುರುಭ್ಯೋನಮಃ
        ನಾನು ಮಾರಿಕಾಂಬ ಜೂನಿಯರ್ ಕಾಲೇಜ್ ನಲ್ಲಿ ೧೦ನೇ ತರಗತಿಯಲ್ಲಿ ಇರುವಾಗ ನಡೆದ ಘಟನೆಯನ್ನು ಈ ದಿನ ನೆನಪಿಸಿಕೊಳ್ಳಲು ಇಶ್ಚಿಸುತ್ತೇನೆ.
       ಆಗ ತಾನೆ ಹೊಸದಾಗಿ ನಮ್ಮ ತರಗತಿಗೆ ಸಮಾಜ ವಿಜ್ಞಾನ ವಿಷಯ ಕಲಿಸಲು ಬಂದ ಶ್ರೀಮತಿ ನಿರ್ಮಲ ಟೀಚರ್ ಗೂ ಮತ್ತು ಮಕ್ಕಳಿಗೂ ಒಬ್ಬರಿಗೊಬ್ಬರು  ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು.
        ಹೀಗಿರುವಾಗ ಮೊದಲ ಕಿರು ಪರೀಕ್ಷೆಯಲ್ಲಿ ಅವರ ವಿಷಯಕ್ಕೆ ಎಲ್ಲರಿಗೂ ಕಡಿಮೆ  ಅಂಕಗಳು ದೊರೆತವು. ಬೇಕೆಂದೇ ಹೀಗೆ ಮಾಡಿರಬೇಕು ಎಂದು ಯೋಚಿಸಿದ ನಾವುಗಳು ಒಂದು ಪೇಪರ್ ನಲ್ಲಿ ಎಲ್ಲರು ಸಹಿ ಮಾಡಿ ಅವರ ಬಗ್ಗೆ  ಪ್ರಾಂಶುಪಾಲರಲ್ಲಿ ದೂರು  ಕೊಟ್ಟೆವು. 
       ನಂತರ ಪ್ರಾಂಶುಪಾಲರು ಯಾವ ರೀತಿ ಅದಕ್ಕೆ ಪ್ರತಿಕ್ರಿಯಿಸಿದರೋ ಗೊತ್ತಿಲ್ಲ.
ಆದರೆ
        ಮರುದಿನ  ನಮ್ಮ ಕ್ಲಾಸ್ ಟೀಚರ್  ಆದ  ಶ್ರೀ ವಿ. ಎನ್. ಹೆಗಡೆ.(ಗಣಿತ  ಮತ್ತು ವಿಜ್ಞಾನ ) ಸರ್ ಬಂದು ಪಾಠ ಮಾಡದೇ ಸುಮ್ನೆ ನಿಂತಾಗ ನಮಗೆಲ್ಲ ಭಯ ಏನಾದರು ಇವರು ಬೈದು ಕ್ಲಾಸ್ ನಿಂದ ಹೊರಗೆ ಕಳುಹಿಸುತ್ತಾರಾ (ಎಂದೂ ಹಾಗೆ ಮಾಡಿದವರಲ್ಲ) ಎಂದು. ಆದರೆ ಶಾಂತವಾಗಿ ಅವರು  ನೀವು ನನ್ನ ಕ್ಲಾಸ್ ಮಕ್ಕಳು  ಅಂತ ನಂಗೆ ಹೆಮ್ಮೆ ಯಿಂದ ಹೇಳಿಕೊಳ್ಳೋ ಅವಕಾಶ ಕಳೆದು ಬಿಟ್ರಿ, ನೀವು ಮಾಡಿದ್ದು ನಿಮಗೆ ಸರಿ ಅನ್ನಿಸಬಹುದು. ನಿಮಗಿನ್ನು ಬುದ್ದಿ ಬೆಳೆದಿಲ್ಲ. ಒಮ್ಮೆ ನೀವು ಶ್ರೀಮತಿ ನಿರ್ಮಲ ಟೀಚರ್ ಮನಸ್ಸಿಗೆ ನೋವು ಆಗಬಹುದಾ ಅಂತ ಯೋಚನೆ ಮಾಡಬೇಕಿತ್ತು . 

        ಅವರು ಒಂದು ಹೆಣ್ಣು ಅವರಿಗೂ ನಿಮ್ಮಂತೆ ಮಕ್ಕಳು ಇದ್ದಾರೆ. ನಿಮ್ಮ  ಒಳ್ಳೆಯದಕ್ಕೆ ಅವರು ಯೋಚಿಸುತ್ತಿರುತ್ತಾರೆ. ಹೆಣ್ಣನ್ನ ಗೌರವದಿಂದ ಕಾಣಬೇಕು ಎಂದು ತಿಳಿ ಹೇಳಿದರು. ಮತ್ತು  ಯಾರಿಗಾದರೂ  ನೋವು ಕೊಟ್ಟು ಪಡೆಯುವ ಸುಖ ನಿಮಗೆ  ಸಂತೋಷವನ್ನು ಕೊಡೋದಿಲ್ಲ.” ಅಂತ ತಿಳಿಸಿ  ಹೇಳಿದರು.
ಆ ಮಾತು ಇಂದಿಗೂ ನನಗೆ ನೆನಪಾಗುತ್ತಿರುತ್ತದೆ. 
              ಈ ಮೂಲಕ ಶ್ರೀಮತಿ ನಿರ್ಮಲ ಟೀಚರ್ ಕ್ಷಮೆ ಮತ್ತೊಮ್ಮೆ ಎಲ್ಲರ ಪರವಾಗಿ ಕೇಳುತ್ತೇನೆ.
              ಹಾಗೂ ಶ್ರೀ ವಿ. ಎನ್. ಹೆಗಡೆ  ಸರ್  ಗೆ ಕ್ರತಜ್ನತೆ ಅರ್ಪಿಸುತ್ತೇನೆ.   

Tuesday 14 February 2012

                       
              ಜಾತ್ರೆಯ ಒಂದು ನೆನಪು

               ಜಾತ್ರೆ ಅಂದಾಗ ಎಲ್ಲರಿಗೂ ನೆನಪಾಗೋದು ಗದ್ದುಗೆಯಲ್ಲಿ ಕುಳಿತ ದೇವಿ, ಜೋಕಾಲಿ, ಬೆಂಡು, ಬತ್ತಾಸ್ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
            ಜಾತ್ರೆ ಬಂತೆಂದರೆ ಏನೋ ಸಂಭ್ರಮ ಸಡಗರ ಪೇಟೆ ಓಡಾಡೋದು ಅದೆಲ್ಲ ನೆನಪಾಗ್ತಾ ಇಲ್ಲ.  ಆದ್ರೆ ಜಾತ್ರೆ ಬಂತೆಂದರೆ ಕಾಲ್ಗೆಜ್ಜೆಗಾಗಿ ಹಠ ಮಾಡಿದ್ದೂ ಮಾತ್ರ ಚೆನ್ನಾಗಿ ನೆನಪಿದೆ.
           ಜಾತ್ರೆಗೆ ಹೋಗುವಾಗಲೆ, ಅದು ಬೇಕು, ಇದು ಬೇಕು, ಹೇಳೋದಾದ್ರೆ ಬರೋದೆ ಬೇಡ, ನಿನ್ನ ಕರ್ಕೊಂಡು ಹೋಗಲ್ಲ ಅಂತ ತಾಕೀತು ಮಾಡುವ ಆಯಿ. ಸದಾ ಆಯಿ  ಜೊತೇನೆ ಓಡಾಡುತಿದ್ದ ನಾನು, ಎಲ್ಲಿ ಜಾತ್ರೆಗೆ ಆಯಿ ಬಿಟ್ಟು ಹೋಗುತ್ತಾಳೊ ಎಂಬ ಭಯಕ್ಕೆ ಆಯಿ ಹೇಳಿದ ಎಲ್ಲ ಕೆಲಸವನ್ನು ಮಾಡಿಕೊಟ್ಟು ಮಧ್ಯಾನ್ಹ ಉರಿ ಬಿಸಿಲಲ್ಲೇ ನಡೆದುಕೊಂಡು ಜಾತ್ರೆಗೆ ಹೋಗುತ್ತಿದ್ದೆ.
         ಮೊದಲು ಗದ್ದುಗೆ ದೇವಿ ದರುಶನ. ಅದೇ ನನಗೆ ಭಯಾನಕ ಸಿನಿಮಾ ನೋಡಿದಂತಾಗುತ್ತಿತ್ತು .ಕಾರಣ ದೇವಿಯ ಮುಂದೆ ಡುರ್ರು ಮುರ್ರು ಅಂತ  ಡೋಲಿಗೆ ೨ ಕೊಲುಗಳನ್ನು ತಿಕ್ಕುತ್ತ ಹಣೆಗೆ ದೊಡ್ಡ ಕುಂಕುಮ, ತಲೆಗೆ ಬಣ್ಣದ ಬಟ್ಟೆ ಕಟ್ಟಿಕೊಂಡು ಡೋಲು ಬಾರಿಸುವವ ಮತ್ತೆ ಡೋಲಿನ ಶಬ್ದ ನಿಂತಂತೆ ಚಾಟಿಯಿಂದ ಏಟು ಹಾಕಿಕೊಂಡು ಬಾಸುಂಡೆ ಬರುವ ಹಾಗೆ ಹೊಡೆದುಕೊಳ್ಳೋ ವ್ಯಕ್ತಿ. ( ಅವ್ರಿಗೆ ನಾನು ಅಂದು ಕೊಡಂತೆ ದುರ್ಗಿ-ಮುರ್ಗಿ ಅಂತ ಹೇಳ್ತಿದ್ದ ನೆನಪು).  ಇದೆಲ್ಲ ನಂಗೆ ನಿಜಕ್ಕೂ ಹೆದರಿಕೆ ತರಿಸುತ್ತಿತು.
         ಆಯಿ ಸೀರೆ ಸೆರಗು ಹಿಡಿದು ಹೆದರಿ ಹೆದರಿ ದೇವರ ದರ್ಶನ ಮುಗದ್ರೆ ಸಾಕಪ್ಪ ಎಂದು ಮುಗ್ಸಿ ಹೊರಗೆ ಬರುವಷ್ಟರಲ್ಲಿ  ಕೆಲವೊಮ್ಮೆ ಆಯಿ ಹತ್ತಿರ ಚೆನ್ನಾಗಿ ಭೈಸಿ ಕೊಂಡಿದ್ದು ಇದೆ.
         ಅದೆನ್ ಹೆದ್ರಕೆನೆ ನಿಂಗೆ ಅವರೇನು ಮನುಷ್ಯರಲ್ವಾ, ಸೆರಗು ಎಲಿಬೇಡ, ಅವ್ರ ಕಡೆ ನೋಡಬೇಡಾ, ಅವ್ರ ಕಡೆ ಯಾಕೆ ನೋಡ್ತೀಯಾ. ದೇವರ ಕಡೆ ನೋಡು, ಎಷ್ಟೇ ಏನೇ ಹೇಳಿದ್ರು ನಂಗೆ ಮಾತ್ರ ಆ ದೇವರ ಕಡೆ ಗಮನಾನೆ ಇರ್ತಿರಲಿಲ್ಲ. ಅಂತು ದೇವರ ದರ್ಶನ ಮುಗ್ಸಿ ಬಂದ್ರೆ ಯುದ್ಧ ಗೆದ್ದಂತೆ ಆಗ್ತಿತ್ತು. ನಂತರ ಏನಿದ್ರು  ಹೊರಗೆ ಬಂದ್ರೆ ರಥಕ್ಕೆ ಕಟ್ಟಿದ ಬಣ್ಣ ಬಣ್ಣದ ಪತಾಕೆಯ ಮೇಲೆ ಕಣ್ಣು. ಪತಾಕೆಗಳು ಚೆನ್ನಾಗಿ ಕಾಣ್ತಿತ್ತು ಕಣ್ಣಿಗೆ.
         ಇನ್ನು ಗದ್ದುಗೆಯಿಂದ ಹೊರಗೆ ಬಂದಿದ್ದೆ ಆಯಿ ಗೆಜ್ಜೆ ಯಾವಾಗ ತಗೋಳೋಣ? ಅದೇ ಅದೇ ಪ್ರಶ್ನೆ.  ಅಯೀಗೋ ನಾಲ್ಕು ಅಂಗಡಿ ವಿಚಾರಿಸೋಣ ಅಂತ ನಂಗೆ ಅದೇನು ಗೊತ್ತಾಗ್ತಿತ್ತು ಹೇಳಿ. ಎಲ್ಲಿ ಬೇಡ ಅಂತ ಮನೆಗೆ ಕರ್ಕೊಂಡು ಹೋಗಿ ಬಿಟ್ರೆ ಅನ್ನೋ ಭಯ. ಕೆಲವೊಮ್ಮೆ ಆಯಿಗೆ ಕಿರಿ ಕಿರಿ ಆಗ್ತಿತ್ತು. ಆಗಾ ಥೂ. ಕೂಸೆ ನಿನ್ನ ಕರಕೊಂಡೆ ಬರಬಾರ್ದಿತ್ತೆ, ಹಠ ಮಾಡಿದ್ರೆ ದುರ್ಗಿ ಮುರ್ಗಿಯವ್ಕೆ ಕೊಟ್ಟು ಬಿಡ್ತೆ ಹೇಳಿ ಬಾಯಿ ಮುಚ್ಸ್ತಿದ್ರು.
       ಆದರು ಎಷ್ಟೆಂದ್ರೂ ನನ್ನ ಆಯಿ ಅಲ್ವಾ? ಎಲ್ಲ ಕಡೆ ವಿಚಾರಿಸಿ ಒಳ್ಳೆ ಗೆಜ್ಜೆ ತೆಗ್ಸಿ ಕೊಟ್ರು.  ಮೊದಲ ಸಲ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದಿದ್ದೆ ಕುಣಿದಿದ್ದು ಇವತ್ತಿಗೂ ನೆನಪಿದೆ.


Wednesday 8 February 2012

ರಾತ್ರಿ ರಾಣಿ




ರಾತ್ರಿ ರಾಣಿ
ಕಪ್ಪು ಕಣ್ಣಿನ ಹುಡುಗಿ
ಸುಟ್ಟು ಬೂದಿಯಾಗಿಹ ಕನಸು
ಮತ್ತದೇ ನೆನೆ ನೆನೆದು
ಮರುಗುವ ಮನಸು
ಹೊತ್ತು ಎತ್ತ ಸಾಗಿದೆ ನಿನ್ನ ಪಯಣ
ಓ ರಾತ್ರಿ ರಾಣಿ
ಹೊತ್ತು ಮುಳುಗುವಾ ಹೊತ್ತು
ಮತ್ತದೇ ಗಾಯನಕೆ ಮತ್ತ
ಬರಿಸುತ ಜನಕೆ
ಸುತ್ತ ಸುಳಿದಾಡುವ ಚಿಂತೆಯಾ ಹಿಂದೆ,
ಜನರ ಮುಂದೆ
ನೀನೇಕೆ ನಿನ್ನ ಕನಸುಗಳ ಕೊಂದೆ?
ಓ ರಾತ್ರಿ ರಾಣಿ
ಹೆಪ್ಪು ಗಟ್ಟಿದಾ ಮನಸು
ಬಿಚ್ಚಿ ಒಮ್ಮೆ ನುಡಿ ಈ ಜನಕೆ(ಜಗಕೆ)
ಈ ಬದುಕು ನನಗೇಕೆ?
ಬದುಕಲು ಬಿಡಿ ನಿಮ್ಮಂತೆ
ಓ ರಾತ್ರಿ ರಾಣಿ.

Tuesday 31 January 2012

ಕನಸ ಕರಗಿಸಲಾರೆ


 ಕನಸ ಕರಗಿಸಲಾರೆ
ಕನಸ ಕರಗಿಸಲಾರೆ
ಕಾಲನಾ ಕರಗಂಟೆ ಕರೆಯುವವರೆಗೆ
ಬಸುರಿಂದ ಟಿಸಿಲೊಡೆದು
ಬಂದಂದಿನಿಂದಲೂ ನನ್ನುಸಿರು ಈ ಕನಸು
              ಕನಸ ಕರಗಿಸಲಾರೆ
ಹಸಿರುಸಿರು ವನಹಸಿರು
ಮನ ಬಂದಂತೆ ತೇಲುವ ಹಕ್ಕಿ
ಅದಕಿಲ್ಲದಿರೆ ಬಂಧ
ಅದರಂತೆ ನನ್ನ ಕನಸು ನಿರ್ಬಂಧ
               ಕನಸ ಕರಗಿಸಲಾರೆ
ಅಮ್ಮನಿಲ್ಲದಿರೆ ಕೊರಗೇಕೆ?
ಅಪ್ಪನಿಲ್ಲದಿರೆ ಭಯವೇಕೆ?
ಕನಸ ಕರೆಯುವೆನು ಕಣ್ಣ ಅಂಗಳಕೆ,
ಅಮ್ಮ ನೀಡುವ ತುತ್ತ ತಿನ್ನುವ ಬಯಕೆ.
ಅಪ್ಪನ ಸಾವಿರ ಹಾರೈಕೆ, ಹೆಬ್ಬಯಕೆ
ರೆಪ್ಪೆಯಡಿ ಮುಚ್ಚಿಡುವೆ
             ಕನಸ ಕರಗಿಸಲಾರೆ.
ಬಿಡಲಾರೆ ಈ ಕನಸ ನನ್ನ ತೊರೆಯಲು,
ಸುತ್ತುವೇನು ಯಮಪಾಶ,
ಸುತ್ತಿದಂತೆ ಮಾರ್ಕಂಡೇಯನ ಕೊರಳು.
ನನಸಾಗದಿರೆ ಚಿಂತೆಯಿಲ್ಲ, 
ಕಟ್ಟಲಾರೆ ಕನಸಿನ ಚಿತೆಯನ್ನ.
            ಕನಸ ಕರಗಿಸಲಾರೆ.

ಮೌನ

ಮೌನದಾ ಚಿಪ್ಪಿನೊಳು
ಮನಸು ಮುಳುಗಿಹುದು
ಶಬ್ದದಾ ಕಲ್ಲನೆಸೆಯದಿರಿ
ಕೆಣಕದಿರಿ ಶಬ್ದಗಳೇ
ಸೆಳೆಯದಿರಿ ಮೌನವನು
ನೀವ್ ಬರಿಯ ಮಾತು
ಈ ಮಾತು ಕಲ್ಪನೆಗೆ ನಿಳುಕದಿರೆ
ಮನ ಸೋತು  ಬೆಚ್ಚಗಿದೆ
ಮೌನದ ತೆಕ್ಕೆಯೊಳು
ಸಡಿಲಿಸದಿರಿ ತೆಕ್ಕೆಯನು
ಮಾತಾಗಿ ಬಿಡಬಹುದು ಈ ಮನವು,
ಮಾತು ತರುವುದು ಬರಿಯ ಭ್ರಮೆ
ಮೌನವೇ ಅಲ್ಲವೇ ಅದಕೆ ಕೊನೆ
ಎಂದಲ್ಲವೇ ನನ್ನ ಮಾತು
ಮೌನದೊಳು ಹೂತು ಸೇರಿದೆ ತನ್ನ ಮನೆ.

Monday 30 January 2012

ತಾಯೆ

         ತಾಯೆ

ಹೆತ್ತು ಹೊತ್ತಿಹ ತಾಯೆ
ತುತ್ತ ಕೊಟ್ಟಿಹ ತಾಯೆ
ನಿನ್ನ ಋಣವ ನಾ ತೀರಿಸಲಾರೆ
ಘಳಿ ಘಳಿಗೆಗೂ ಅರಚುವ ಬಾಯಿಗೆ
ಪ್ರೀತಿಯ ತುತ್ತನಿಟ್ಟವಳೆ
ತಪ್ಪು ಹೆಜ್ಜೆ ಇಟ್ಟಾಗ ನಿಲ್ಲಿಸಿದೆ ನೆಟ್ಟಗೆ
                    ಓ ಎನ್ನ ತಾಯೆ
ಬಾಲ್ಯವದು ಬಯಸಿದಂತೆ ಕಳೆದಾಗ
ಹರೆಯದಾ ಹಲವು ವಿಷಯವಾ
ಅರುಹಿದವಳೆ
ಹರೆಯದಾ ಬಯಕೆ, ಮರಳುಗಾಡಿನ ಮರಿಚಿಕೆ
ಅದನ ಹಿಡಿದಿಡ ಬೇಡ ಜೋಕೆ
ಮನವಿರಲಿ ನಿನ್ನ ಅಂಕೆ
ಎಂದೆಲ್ಲಾ ಬುದ್ದಿ  ಮಾತನು ತಿಳಿಸಿದವಳೆ
                    ಓ ಎನ್ನ ತಾಯೆ

Thursday 26 January 2012

ಪ್ರಾರ್ಥನೆ



 


ಭಕ್ತಿ ಕೊಡೆ ಮಾರಿಕಾಂಬೆ ನಾನು ಬೇಡುವೆ
ಭಕ್ತಿ ಇಂದ ಮುಕ್ತಿ ಪಡೆದು ಧನ್ಯನಾಗುವೆ
ಶಿರಸಿ ನಗರದಿ ನೀನು ನೆಲಸಿರುವೆ
ಜನರೆಲ್ಲರನು ನೀನು ಕಾಪಾಡುವೆ
ಸಹ್ಯಾದ್ರಿಯಾ ಶಿಖರದಿ ನಿಂತಿರುವ ತಾಯೇ
ಮಹಿಷಾಸುರ ಮರ್ಧಿನಿ ನೀ ಎನ್ನ ಕಾಯೆ
ಬರುತಿಹುದು ವರ್ಷ ಬಿಟ್ಟು  ವರುಷ  ನಿನ್ನಯ ಜಾತ್ರೆ
ಹಲವೆಡೆ ಹರಡಿರುವ ಜನರಿಗೆ ನಿನ್ನೆಡೆ ಯಾತ್ರೆ
ಭಯ ಭಕುತಿ ತರುತಿಹುದು ನಿನ್ನ ಆ ಚರಿತ್ರೆ
ಹಲವರು ಭಕುತರು ನಿನ್ನೆಡೆ ಬರುತಿಹರು
ಹರಕೆ ಹೊತ್ತು ತರುತಿಹರು
ಫಲಿಸು ನೀನು ಅವರ ವರಗಳನು
ನಿನ್ನೆಡೆಯಲ್ಲಿ ನಾ ಬೇಡುತಿರುವೆನು
ಸುತ್ತಲಿರುವ ಗ್ರಾಮಕೆ ದೇವಿ ನೀನು
ನಿನ್ನೆಡೆಯಿರುವ  ನಾನೆ ಧನ್ಯ