Tuesday 14 February 2012

                       
              ಜಾತ್ರೆಯ ಒಂದು ನೆನಪು

               ಜಾತ್ರೆ ಅಂದಾಗ ಎಲ್ಲರಿಗೂ ನೆನಪಾಗೋದು ಗದ್ದುಗೆಯಲ್ಲಿ ಕುಳಿತ ದೇವಿ, ಜೋಕಾಲಿ, ಬೆಂಡು, ಬತ್ತಾಸ್ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
            ಜಾತ್ರೆ ಬಂತೆಂದರೆ ಏನೋ ಸಂಭ್ರಮ ಸಡಗರ ಪೇಟೆ ಓಡಾಡೋದು ಅದೆಲ್ಲ ನೆನಪಾಗ್ತಾ ಇಲ್ಲ.  ಆದ್ರೆ ಜಾತ್ರೆ ಬಂತೆಂದರೆ ಕಾಲ್ಗೆಜ್ಜೆಗಾಗಿ ಹಠ ಮಾಡಿದ್ದೂ ಮಾತ್ರ ಚೆನ್ನಾಗಿ ನೆನಪಿದೆ.
           ಜಾತ್ರೆಗೆ ಹೋಗುವಾಗಲೆ, ಅದು ಬೇಕು, ಇದು ಬೇಕು, ಹೇಳೋದಾದ್ರೆ ಬರೋದೆ ಬೇಡ, ನಿನ್ನ ಕರ್ಕೊಂಡು ಹೋಗಲ್ಲ ಅಂತ ತಾಕೀತು ಮಾಡುವ ಆಯಿ. ಸದಾ ಆಯಿ  ಜೊತೇನೆ ಓಡಾಡುತಿದ್ದ ನಾನು, ಎಲ್ಲಿ ಜಾತ್ರೆಗೆ ಆಯಿ ಬಿಟ್ಟು ಹೋಗುತ್ತಾಳೊ ಎಂಬ ಭಯಕ್ಕೆ ಆಯಿ ಹೇಳಿದ ಎಲ್ಲ ಕೆಲಸವನ್ನು ಮಾಡಿಕೊಟ್ಟು ಮಧ್ಯಾನ್ಹ ಉರಿ ಬಿಸಿಲಲ್ಲೇ ನಡೆದುಕೊಂಡು ಜಾತ್ರೆಗೆ ಹೋಗುತ್ತಿದ್ದೆ.
         ಮೊದಲು ಗದ್ದುಗೆ ದೇವಿ ದರುಶನ. ಅದೇ ನನಗೆ ಭಯಾನಕ ಸಿನಿಮಾ ನೋಡಿದಂತಾಗುತ್ತಿತ್ತು .ಕಾರಣ ದೇವಿಯ ಮುಂದೆ ಡುರ್ರು ಮುರ್ರು ಅಂತ  ಡೋಲಿಗೆ ೨ ಕೊಲುಗಳನ್ನು ತಿಕ್ಕುತ್ತ ಹಣೆಗೆ ದೊಡ್ಡ ಕುಂಕುಮ, ತಲೆಗೆ ಬಣ್ಣದ ಬಟ್ಟೆ ಕಟ್ಟಿಕೊಂಡು ಡೋಲು ಬಾರಿಸುವವ ಮತ್ತೆ ಡೋಲಿನ ಶಬ್ದ ನಿಂತಂತೆ ಚಾಟಿಯಿಂದ ಏಟು ಹಾಕಿಕೊಂಡು ಬಾಸುಂಡೆ ಬರುವ ಹಾಗೆ ಹೊಡೆದುಕೊಳ್ಳೋ ವ್ಯಕ್ತಿ. ( ಅವ್ರಿಗೆ ನಾನು ಅಂದು ಕೊಡಂತೆ ದುರ್ಗಿ-ಮುರ್ಗಿ ಅಂತ ಹೇಳ್ತಿದ್ದ ನೆನಪು).  ಇದೆಲ್ಲ ನಂಗೆ ನಿಜಕ್ಕೂ ಹೆದರಿಕೆ ತರಿಸುತ್ತಿತು.
         ಆಯಿ ಸೀರೆ ಸೆರಗು ಹಿಡಿದು ಹೆದರಿ ಹೆದರಿ ದೇವರ ದರ್ಶನ ಮುಗದ್ರೆ ಸಾಕಪ್ಪ ಎಂದು ಮುಗ್ಸಿ ಹೊರಗೆ ಬರುವಷ್ಟರಲ್ಲಿ  ಕೆಲವೊಮ್ಮೆ ಆಯಿ ಹತ್ತಿರ ಚೆನ್ನಾಗಿ ಭೈಸಿ ಕೊಂಡಿದ್ದು ಇದೆ.
         ಅದೆನ್ ಹೆದ್ರಕೆನೆ ನಿಂಗೆ ಅವರೇನು ಮನುಷ್ಯರಲ್ವಾ, ಸೆರಗು ಎಲಿಬೇಡ, ಅವ್ರ ಕಡೆ ನೋಡಬೇಡಾ, ಅವ್ರ ಕಡೆ ಯಾಕೆ ನೋಡ್ತೀಯಾ. ದೇವರ ಕಡೆ ನೋಡು, ಎಷ್ಟೇ ಏನೇ ಹೇಳಿದ್ರು ನಂಗೆ ಮಾತ್ರ ಆ ದೇವರ ಕಡೆ ಗಮನಾನೆ ಇರ್ತಿರಲಿಲ್ಲ. ಅಂತು ದೇವರ ದರ್ಶನ ಮುಗ್ಸಿ ಬಂದ್ರೆ ಯುದ್ಧ ಗೆದ್ದಂತೆ ಆಗ್ತಿತ್ತು. ನಂತರ ಏನಿದ್ರು  ಹೊರಗೆ ಬಂದ್ರೆ ರಥಕ್ಕೆ ಕಟ್ಟಿದ ಬಣ್ಣ ಬಣ್ಣದ ಪತಾಕೆಯ ಮೇಲೆ ಕಣ್ಣು. ಪತಾಕೆಗಳು ಚೆನ್ನಾಗಿ ಕಾಣ್ತಿತ್ತು ಕಣ್ಣಿಗೆ.
         ಇನ್ನು ಗದ್ದುಗೆಯಿಂದ ಹೊರಗೆ ಬಂದಿದ್ದೆ ಆಯಿ ಗೆಜ್ಜೆ ಯಾವಾಗ ತಗೋಳೋಣ? ಅದೇ ಅದೇ ಪ್ರಶ್ನೆ.  ಅಯೀಗೋ ನಾಲ್ಕು ಅಂಗಡಿ ವಿಚಾರಿಸೋಣ ಅಂತ ನಂಗೆ ಅದೇನು ಗೊತ್ತಾಗ್ತಿತ್ತು ಹೇಳಿ. ಎಲ್ಲಿ ಬೇಡ ಅಂತ ಮನೆಗೆ ಕರ್ಕೊಂಡು ಹೋಗಿ ಬಿಟ್ರೆ ಅನ್ನೋ ಭಯ. ಕೆಲವೊಮ್ಮೆ ಆಯಿಗೆ ಕಿರಿ ಕಿರಿ ಆಗ್ತಿತ್ತು. ಆಗಾ ಥೂ. ಕೂಸೆ ನಿನ್ನ ಕರಕೊಂಡೆ ಬರಬಾರ್ದಿತ್ತೆ, ಹಠ ಮಾಡಿದ್ರೆ ದುರ್ಗಿ ಮುರ್ಗಿಯವ್ಕೆ ಕೊಟ್ಟು ಬಿಡ್ತೆ ಹೇಳಿ ಬಾಯಿ ಮುಚ್ಸ್ತಿದ್ರು.
       ಆದರು ಎಷ್ಟೆಂದ್ರೂ ನನ್ನ ಆಯಿ ಅಲ್ವಾ? ಎಲ್ಲ ಕಡೆ ವಿಚಾರಿಸಿ ಒಳ್ಳೆ ಗೆಜ್ಜೆ ತೆಗ್ಸಿ ಕೊಟ್ರು.  ಮೊದಲ ಸಲ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದಿದ್ದೆ ಕುಣಿದಿದ್ದು ಇವತ್ತಿಗೂ ನೆನಪಿದೆ.


Wednesday 8 February 2012

ರಾತ್ರಿ ರಾಣಿ




ರಾತ್ರಿ ರಾಣಿ
ಕಪ್ಪು ಕಣ್ಣಿನ ಹುಡುಗಿ
ಸುಟ್ಟು ಬೂದಿಯಾಗಿಹ ಕನಸು
ಮತ್ತದೇ ನೆನೆ ನೆನೆದು
ಮರುಗುವ ಮನಸು
ಹೊತ್ತು ಎತ್ತ ಸಾಗಿದೆ ನಿನ್ನ ಪಯಣ
ಓ ರಾತ್ರಿ ರಾಣಿ
ಹೊತ್ತು ಮುಳುಗುವಾ ಹೊತ್ತು
ಮತ್ತದೇ ಗಾಯನಕೆ ಮತ್ತ
ಬರಿಸುತ ಜನಕೆ
ಸುತ್ತ ಸುಳಿದಾಡುವ ಚಿಂತೆಯಾ ಹಿಂದೆ,
ಜನರ ಮುಂದೆ
ನೀನೇಕೆ ನಿನ್ನ ಕನಸುಗಳ ಕೊಂದೆ?
ಓ ರಾತ್ರಿ ರಾಣಿ
ಹೆಪ್ಪು ಗಟ್ಟಿದಾ ಮನಸು
ಬಿಚ್ಚಿ ಒಮ್ಮೆ ನುಡಿ ಈ ಜನಕೆ(ಜಗಕೆ)
ಈ ಬದುಕು ನನಗೇಕೆ?
ಬದುಕಲು ಬಿಡಿ ನಿಮ್ಮಂತೆ
ಓ ರಾತ್ರಿ ರಾಣಿ.