Tuesday 31 January 2012

ಕನಸ ಕರಗಿಸಲಾರೆ


 ಕನಸ ಕರಗಿಸಲಾರೆ
ಕನಸ ಕರಗಿಸಲಾರೆ
ಕಾಲನಾ ಕರಗಂಟೆ ಕರೆಯುವವರೆಗೆ
ಬಸುರಿಂದ ಟಿಸಿಲೊಡೆದು
ಬಂದಂದಿನಿಂದಲೂ ನನ್ನುಸಿರು ಈ ಕನಸು
              ಕನಸ ಕರಗಿಸಲಾರೆ
ಹಸಿರುಸಿರು ವನಹಸಿರು
ಮನ ಬಂದಂತೆ ತೇಲುವ ಹಕ್ಕಿ
ಅದಕಿಲ್ಲದಿರೆ ಬಂಧ
ಅದರಂತೆ ನನ್ನ ಕನಸು ನಿರ್ಬಂಧ
               ಕನಸ ಕರಗಿಸಲಾರೆ
ಅಮ್ಮನಿಲ್ಲದಿರೆ ಕೊರಗೇಕೆ?
ಅಪ್ಪನಿಲ್ಲದಿರೆ ಭಯವೇಕೆ?
ಕನಸ ಕರೆಯುವೆನು ಕಣ್ಣ ಅಂಗಳಕೆ,
ಅಮ್ಮ ನೀಡುವ ತುತ್ತ ತಿನ್ನುವ ಬಯಕೆ.
ಅಪ್ಪನ ಸಾವಿರ ಹಾರೈಕೆ, ಹೆಬ್ಬಯಕೆ
ರೆಪ್ಪೆಯಡಿ ಮುಚ್ಚಿಡುವೆ
             ಕನಸ ಕರಗಿಸಲಾರೆ.
ಬಿಡಲಾರೆ ಈ ಕನಸ ನನ್ನ ತೊರೆಯಲು,
ಸುತ್ತುವೇನು ಯಮಪಾಶ,
ಸುತ್ತಿದಂತೆ ಮಾರ್ಕಂಡೇಯನ ಕೊರಳು.
ನನಸಾಗದಿರೆ ಚಿಂತೆಯಿಲ್ಲ, 
ಕಟ್ಟಲಾರೆ ಕನಸಿನ ಚಿತೆಯನ್ನ.
            ಕನಸ ಕರಗಿಸಲಾರೆ.

ಮೌನ

ಮೌನದಾ ಚಿಪ್ಪಿನೊಳು
ಮನಸು ಮುಳುಗಿಹುದು
ಶಬ್ದದಾ ಕಲ್ಲನೆಸೆಯದಿರಿ
ಕೆಣಕದಿರಿ ಶಬ್ದಗಳೇ
ಸೆಳೆಯದಿರಿ ಮೌನವನು
ನೀವ್ ಬರಿಯ ಮಾತು
ಈ ಮಾತು ಕಲ್ಪನೆಗೆ ನಿಳುಕದಿರೆ
ಮನ ಸೋತು  ಬೆಚ್ಚಗಿದೆ
ಮೌನದ ತೆಕ್ಕೆಯೊಳು
ಸಡಿಲಿಸದಿರಿ ತೆಕ್ಕೆಯನು
ಮಾತಾಗಿ ಬಿಡಬಹುದು ಈ ಮನವು,
ಮಾತು ತರುವುದು ಬರಿಯ ಭ್ರಮೆ
ಮೌನವೇ ಅಲ್ಲವೇ ಅದಕೆ ಕೊನೆ
ಎಂದಲ್ಲವೇ ನನ್ನ ಮಾತು
ಮೌನದೊಳು ಹೂತು ಸೇರಿದೆ ತನ್ನ ಮನೆ.

Monday 30 January 2012

ತಾಯೆ

         ತಾಯೆ

ಹೆತ್ತು ಹೊತ್ತಿಹ ತಾಯೆ
ತುತ್ತ ಕೊಟ್ಟಿಹ ತಾಯೆ
ನಿನ್ನ ಋಣವ ನಾ ತೀರಿಸಲಾರೆ
ಘಳಿ ಘಳಿಗೆಗೂ ಅರಚುವ ಬಾಯಿಗೆ
ಪ್ರೀತಿಯ ತುತ್ತನಿಟ್ಟವಳೆ
ತಪ್ಪು ಹೆಜ್ಜೆ ಇಟ್ಟಾಗ ನಿಲ್ಲಿಸಿದೆ ನೆಟ್ಟಗೆ
                    ಓ ಎನ್ನ ತಾಯೆ
ಬಾಲ್ಯವದು ಬಯಸಿದಂತೆ ಕಳೆದಾಗ
ಹರೆಯದಾ ಹಲವು ವಿಷಯವಾ
ಅರುಹಿದವಳೆ
ಹರೆಯದಾ ಬಯಕೆ, ಮರಳುಗಾಡಿನ ಮರಿಚಿಕೆ
ಅದನ ಹಿಡಿದಿಡ ಬೇಡ ಜೋಕೆ
ಮನವಿರಲಿ ನಿನ್ನ ಅಂಕೆ
ಎಂದೆಲ್ಲಾ ಬುದ್ದಿ  ಮಾತನು ತಿಳಿಸಿದವಳೆ
                    ಓ ಎನ್ನ ತಾಯೆ

Thursday 26 January 2012

ಪ್ರಾರ್ಥನೆ



 


ಭಕ್ತಿ ಕೊಡೆ ಮಾರಿಕಾಂಬೆ ನಾನು ಬೇಡುವೆ
ಭಕ್ತಿ ಇಂದ ಮುಕ್ತಿ ಪಡೆದು ಧನ್ಯನಾಗುವೆ
ಶಿರಸಿ ನಗರದಿ ನೀನು ನೆಲಸಿರುವೆ
ಜನರೆಲ್ಲರನು ನೀನು ಕಾಪಾಡುವೆ
ಸಹ್ಯಾದ್ರಿಯಾ ಶಿಖರದಿ ನಿಂತಿರುವ ತಾಯೇ
ಮಹಿಷಾಸುರ ಮರ್ಧಿನಿ ನೀ ಎನ್ನ ಕಾಯೆ
ಬರುತಿಹುದು ವರ್ಷ ಬಿಟ್ಟು  ವರುಷ  ನಿನ್ನಯ ಜಾತ್ರೆ
ಹಲವೆಡೆ ಹರಡಿರುವ ಜನರಿಗೆ ನಿನ್ನೆಡೆ ಯಾತ್ರೆ
ಭಯ ಭಕುತಿ ತರುತಿಹುದು ನಿನ್ನ ಆ ಚರಿತ್ರೆ
ಹಲವರು ಭಕುತರು ನಿನ್ನೆಡೆ ಬರುತಿಹರು
ಹರಕೆ ಹೊತ್ತು ತರುತಿಹರು
ಫಲಿಸು ನೀನು ಅವರ ವರಗಳನು
ನಿನ್ನೆಡೆಯಲ್ಲಿ ನಾ ಬೇಡುತಿರುವೆನು
ಸುತ್ತಲಿರುವ ಗ್ರಾಮಕೆ ದೇವಿ ನೀನು
ನಿನ್ನೆಡೆಯಿರುವ  ನಾನೆ ಧನ್ಯ